ರಚನೆ: ಶ್ರೀ ಪುರಂದರದಾಸರು
ರಾಮ ನಾಮ ಪಾಯಸಕ್ಕೆ
ಕೃಷ್ಣ ನಾಮ ಸಕ್ಕರೆ |
ವಿಠ್ಠಲ ನಾಮ ತುಪ್ಪವ ಸೇರಿಸಿ
ಬಾಯಿ ಚಪ್ಪರಿಸಿರೋ || ಪ ||

ಒಮ್ಮಾನ ಗೋಧಿಯ ತಂದು
ವೈರಾಗ್ಯ ಕಲ್ಲಲಿ ಬೀಸಿ |
ಸುಮ್ಮಾನೆ ಸಜ್ಜಿಗೆ ತೆಗೆದು
ಗಮ್ಮಾನೆ ಶಾವಿಗೆ ಹೊಸೆದು || ೧ ||

ಹೃದಯವೆಂಬೊ ಮಡಕೆಯಲಿ
ಭಾವವೆಂಬೊ ಎಸರಲಿ |
ಬುದ್ಧಿಯಿಂದ ಪಾಕ ಮಾಡಿ
ಹರಿವಾಣಕೆ ಬಡಿಸಿಕೊಂಡು || ೨ ||

ಆನಂದ ಆನಂದವೆಂಬೊ ತೇಗು
ಬಂದಿತು ಕಾಣಿರೊ |
ಆನಂದ ಮೂರುತಿ ನಮ್ಮ
ಪುರಂದರ ವಿಠ್ಠಲನ ನೆನೆಯಿರೊ || ೩ ||

ವರ್ಗ: ಪುರಂದರದಾಸ ಸಾಹಿತ್ಯ

ವರ್ಗ: ಪುರಂದರದಾಸ ಸಾಹಿತ್ಯ